Saturday, May 23, 2009

ತೇನವಿನಾ

ಅಂತರಂಗದ ಅಭಿಸಾರಿಕೆಯ ಸಾಂಗತ್ಯದಲಿ
ಅನುರಕ್ತನಾಗಿ ಬಂದ ಗೆಳೆಯನನ್ನು
ನೀ ಯಾರೆಂದು ಪ್ರಶ್ನಿಸುವಾಗ
ಕಣ್ಣ ಕನ್ನಡಿಯಲ್ಲಿ ಪ್ರತಿಬಿಂಬಿಸದೆ ಅನುರಾಗದ ಕುರುಹು?

ನಸುಕಿನಲಿ ನಿನ್ನ ನಸುನಗುವಿನ ಮೊಗದ ನೆನಪೇ ಆತ್ಮಸ್ನಾನ;
ದಿನದ ಕ್ಷಣಕ್ಷಣವು ವಿರಹರವಿಯ ತಾಪದಿ ಬೆಂದು
ಮುಸ್ಸಂಜೆ ನಿನ್ನ ಮುಗುಳ್ನಗೆಗಾಗಿ ಅರಸುತ್ತ
ನಿಶೆಯಲ್ಲಿ ನನ್ನ ಅಪೂರ್ಣ ಅಸ್ತಿತ್ವ
ಕರಗಿ ಶೂನ್ಯವಾಗುವ ಮುನ್ನ
ನನ್ನಲ್ಲಿಳಿಯದ ಪ್ರೀತಿಯ ಸೆಲೆಗೆ
ನೆಲೆಯಾಗಿ ಬರಲಾರೆಯಾ?
ಸಂಭ್ರಮ ಸಮಾಗಮ ಸಂಕ್ರಮಣದ
ಕನಸು-ನನಸುಗಳ ನಡುವಿನಂತರವಾಗಿ
ಹೀಗೆ ಉಳಿಯುವೆಯಾ?

ಪ್ರೇಮಸ್ಪರ್ಶದ ಯಾಚನೆಯಲಿ
ಇನಿಯಳ ಸನಿಹವನು ಕೋರುವ,
ಆಲಿಂಗನದ ಅಮೃತಧಾರೆಯಲಿ
ಕರಗಿ ಹೋಗಲು ತವಕಿಸುವ
ಈ ತಪ್ತ ಹೃದಯದ
ಸುಪ್ತ ಭಾವನೆಗಳ ತಿಳಿಸುವುದೆಂತು?
ಈಗೇಕೆ, ಹೀಗೇಕೆ ಎಂಬೆಲ್ಲ
ಸಂದಿಗ್ಧ ಪ್ರಶ್ನೆಗಳ ಮೀರಿ ಬರುತಿರುವ
ಭಾವಪ್ರವಾಹದ ಅಲೆಗಳಿಗೆ ಸಿಕ್ಕಿ
ಅರೆಘಳಿಗೆ ನಿನ್ನಿರಿವು ಕಾಣದೆ ಮರುಗುವ ಎನಗೆ
ರಮಣ-ಮರಣಗಳ ನಡುವಿನಂತರ
ನೀನೆಂದು ಅರಿಯೆಯಾ?

ಅರ್ಥವಾಗದ ತುಡಿತ-ತುಮುಲ ತಾಳಲಾರದೆ
ಎದೆಯಿಂದುಕ್ಕಿ ಬಂದ ಕಣ್ಣಂಚಿನ
ಹನಿಯೊಂದು ಉಸುರುತಿದೆ
-ಕಾಲದಲಿ ಕರಗಿ ಹೊಗುವ ನಾನು-ನೀನುಗಳ ನಡುವೆ
ಭಾವವೊಂದೇ ನಿತ್ಯ, ಪ್ರೇಮವೊಂದೇ ಸತ್ಯ!