Tuesday, December 29, 2009

ಯಾವುದಾದರೇನು ಭಾಷೆ?

ಹರಿಯಬಿಡು ಮನೋಭಿಲಾಷೆ


ಗಣಕ ಇಲಿಯ ಬೆನ್ನತ್ತಿ ಮನ ಮಾರ್ಜಾಲ,

ಸುತ್ತಿ ಬರಲಿ ಸಪ್ತ ಸಾಗರ ಬೆಸೆಯುವ ಅಂತರ್ಜಾಲ

ಬದಿಗಿಡು ಕುಂದು ಕೊರತೆ,

ಜಿನುಗಲಿ ಭಾವನೆಗಳ ಒರತೆ,

ಬೆಳಗಲಿ ಪ್ರೀತಿಯ ಹಣತೆ

ಆಡುಮಾತು, ಗಾಳಿಮಾತು, ಪಿಸುಮಾತು

ಯಾವುದಾದರೇನು ಸವಿಮಾತು?

ಬೆಸೆಯಲಿ ಸ್ನೇಹ ಸೇತು

Saturday, May 23, 2009

ತೇನವಿನಾ

ಅಂತರಂಗದ ಅಭಿಸಾರಿಕೆಯ ಸಾಂಗತ್ಯದಲಿ
ಅನುರಕ್ತನಾಗಿ ಬಂದ ಗೆಳೆಯನನ್ನು
ನೀ ಯಾರೆಂದು ಪ್ರಶ್ನಿಸುವಾಗ
ಕಣ್ಣ ಕನ್ನಡಿಯಲ್ಲಿ ಪ್ರತಿಬಿಂಬಿಸದೆ ಅನುರಾಗದ ಕುರುಹು?

ನಸುಕಿನಲಿ ನಿನ್ನ ನಸುನಗುವಿನ ಮೊಗದ ನೆನಪೇ ಆತ್ಮಸ್ನಾನ;
ದಿನದ ಕ್ಷಣಕ್ಷಣವು ವಿರಹರವಿಯ ತಾಪದಿ ಬೆಂದು
ಮುಸ್ಸಂಜೆ ನಿನ್ನ ಮುಗುಳ್ನಗೆಗಾಗಿ ಅರಸುತ್ತ
ನಿಶೆಯಲ್ಲಿ ನನ್ನ ಅಪೂರ್ಣ ಅಸ್ತಿತ್ವ
ಕರಗಿ ಶೂನ್ಯವಾಗುವ ಮುನ್ನ
ನನ್ನಲ್ಲಿಳಿಯದ ಪ್ರೀತಿಯ ಸೆಲೆಗೆ
ನೆಲೆಯಾಗಿ ಬರಲಾರೆಯಾ?
ಸಂಭ್ರಮ ಸಮಾಗಮ ಸಂಕ್ರಮಣದ
ಕನಸು-ನನಸುಗಳ ನಡುವಿನಂತರವಾಗಿ
ಹೀಗೆ ಉಳಿಯುವೆಯಾ?

ಪ್ರೇಮಸ್ಪರ್ಶದ ಯಾಚನೆಯಲಿ
ಇನಿಯಳ ಸನಿಹವನು ಕೋರುವ,
ಆಲಿಂಗನದ ಅಮೃತಧಾರೆಯಲಿ
ಕರಗಿ ಹೋಗಲು ತವಕಿಸುವ
ಈ ತಪ್ತ ಹೃದಯದ
ಸುಪ್ತ ಭಾವನೆಗಳ ತಿಳಿಸುವುದೆಂತು?
ಈಗೇಕೆ, ಹೀಗೇಕೆ ಎಂಬೆಲ್ಲ
ಸಂದಿಗ್ಧ ಪ್ರಶ್ನೆಗಳ ಮೀರಿ ಬರುತಿರುವ
ಭಾವಪ್ರವಾಹದ ಅಲೆಗಳಿಗೆ ಸಿಕ್ಕಿ
ಅರೆಘಳಿಗೆ ನಿನ್ನಿರಿವು ಕಾಣದೆ ಮರುಗುವ ಎನಗೆ
ರಮಣ-ಮರಣಗಳ ನಡುವಿನಂತರ
ನೀನೆಂದು ಅರಿಯೆಯಾ?

ಅರ್ಥವಾಗದ ತುಡಿತ-ತುಮುಲ ತಾಳಲಾರದೆ
ಎದೆಯಿಂದುಕ್ಕಿ ಬಂದ ಕಣ್ಣಂಚಿನ
ಹನಿಯೊಂದು ಉಸುರುತಿದೆ
-ಕಾಲದಲಿ ಕರಗಿ ಹೊಗುವ ನಾನು-ನೀನುಗಳ ನಡುವೆ
ಭಾವವೊಂದೇ ನಿತ್ಯ, ಪ್ರೇಮವೊಂದೇ ಸತ್ಯ!

Friday, May 08, 2009

Joke of the day:

A turtle is crossing the road when it's mugged by two snails. Police show up and ask the turtle what happened. Turtle, still shaken up by the incident, replies - " I don't know. It all happened too fast!"